PMBJK ಹೊಸ ದೂರ ನೀತಿಗೆ ಮಾಲೀಕರ ತೀವ್ರ ಆಕ್ಷೇಪ – ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
PMBJK ಹೊಸ ದೂರ ನೀತಿಗೆ ಮಾಲೀಕರ ತೀವ್ರ ಆಕ್ಷೇಪ – ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಬೆಂಗಳೂರು: ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ಕೇಂದ್ರಗಳ (PMBJK) ಮಾಲೀಕರ ಸಂಘವು ಹೊಸ ದೂರ ನೀತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಈ ನೀತಿ ಅಸ್ತಿತ್ವ opದಲ್ಲಿರುವ ಕೇಂದ್ರಗಳ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಸಂಘದ ಪ್ರತಿನಿಧಿಗಳು ಆರೋಪಿಸಿದ್ದಾರೆ.
ನಗರದಲ್ಲಿಂದು ನಡೆದ ಪ್ರತಿಭಟನೆಯಲ್ಲಿ ಸಂಘದ ಸದಸ್ಯರು ಕಪ್ಪುಪಟ್ಟಿ ಧರಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಶೋಕ್ ಬಿ.ಕೆ ರವರು ಮಾತನಾಡಿ “ಹೊಸ ದೂರ ನೀತಿ ಜಾರಿಗೆ ಬಂದರೆ ಈಗಾಗಲೇ ಭಾರೀ ಹೂಡಿಕೆ ಮಾಡಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಸರ್ಕಾರ ತಕ್ಷಣವೇ ನೀತಿಯನ್ನು ಮರುಪರಿಶೀಲಿಸಬೇಕು” ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಚಂದ್ರಶೇಖರ್ ವೈ. ಮಾತನಾಡಿ, “ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಅನೇಕ ಕೇಂದ್ರ ಮಾಲೀಕರು ಪ್ರಮುಖ ಸ್ಥಳಗಳಲ್ಲಿ ಕೇಂದ್ರ ಸ್ಥಾಪನೆ ಮತ್ತು ನಿರ್ವಹಣೆಗೆ ಭಾರೀ ಸಾಲ ಪಡೆದು ಹೂಡಿಕೆ ಮಾಡಿದ್ದಾರೆ. ಜನಔಷಧಿ ಉತ್ಪನ್ನಗಳ ಸಂಪೂರ್ಣ ಶ್ರೇಣಿಯನ್ನು ನಿರಂತರವಾಗಿ ಲಭ್ಯವಿರಿಸಲು ಹೆಚ್ಚಿನ ದಾಸ್ತಾನುಗಳನ್ನು ಹೊಂದಬೇಕಾಗುತ್ತದೆ. ಇಂತಹ ನಿರ್ವಹಣೆಗೆ ಸಿಬ್ಬಂದಿ ಸಂಬಳ ಹಾಗೂ ಪ್ರತಿ ತಿಂಗಳಿಗೆ ₹40,000 ರಿಂದ ₹80,000 ವರೆಗಿನ ವಾಣಿಜ್ಯ ಬಾಡಿಗೆ, 10 ತಿಂಗಳ ಠೇವಣಿ ಮತ್ತು ದಾಸ್ತಾನು ಅವಧಿ ಮುಗಿದಾಗ ಉಂಟಾಗುವ ನಷ್ಟವು ಭಾರೀ ಹೊರೆ ಉಂಟುಮಾಡುತ್ತಿವೆ” ಎಂದರು.
ಹೊಸ ನೀತಿ ಜಾರಿಯಾದರೆ ಇಂತಹ ವೆಚ್ಚಗಳನ್ನು ನಿಭಾಯಿಸುವುದು ಅಸ್ತಿತ್ವದಲ್ಲಿರುವ ಕೇಂದ್ರಗಳಿಗೆ ದೊಡ್ಡ ಸವಾಲಾಗಲಿದೆ ಎಂದು ಅವರು ಎಚ್ಚರಿಸಿದರು.
ಪಿ.ಎಂ.ಬಿ.ಐ. (PMBI) ಸಂಸ್ಥೆಯಿಂದ ಕೆಲವು ಅಗತ್ಯ ಔಷಧಿಗಳು ಸರಿಯಾದ ಸಮಯಕ್ಕೆ ಸರಬರಾಜಾಗುತ್ತಿಲ್ಲ. ಇದರಿಂದಾಗಿ ಜನತೆಗೆ ಅವಶ್ಯಕ ಔಷಧಿಗಳನ್ನು ಪೂರೈಸುವಲ್ಲಿ ಕೇಂದ್ರಗಳು ದೊಡ್ಡ ಮಟ್ಟದ ಕಷ್ಟ ಅನುಭವಿಸುತ್ತಿವೆ.
ಸಂಘವು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ಅಥವಾ ದೆಹಲಿಯಲ್ಲಿ ನೇರ ಸಭೆ ನಡೆಸಿ ತಮ್ಮ ಸಲಹೆಗಳನ್ನು ಮಂಡಿಸಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸಿದೆ. “ಈ ಯೋಜನೆಯ ಯಶಸ್ಸಿಗಾಗಿ ನಾವು ಸಮರ್ಪಣೆ ಮತ್ತು ಹೂಡಿಕೆಯಿಂದ ನಿರಂತರವಾಗಿ ಸೇವೆ ನೀಡುತ್ತಿದ್ದೇವೆ. ಹೊಸ ನೀತಿಯಿಂದ ಕೇಂದ್ರ ಮಾಲೀಕರ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದು” ಎಂದು ಪ್ರಧಾನ ಕಾರ್ಯದರ್ಶಿ ಡಾ. ಪಲ್ಲವಿ ಹೆಚ್ ಎನ್ ರವರು ಒತ್ತಾಯಿಸಿದರು.
ಈ ವೇಳೆ ಸಂಘದ ಜಂಟಿ ಕಾರ್ಯದರ್ಶಿ ಚಂದ್ರಶೇಖರ್ ವಿ, ಜಂಟಿ ಖಜಾಂಚಿ ಮನೋಹರ್, ಸದಸ್ಯರಾದ ವಿಜಯ್ ಕೃಷ್ಣ ಅಶೋಕ್ ಶೆಟ್ಟಿ ಸೇರಿದಂತೆ ಸಂಘದ ಸದಸ್ಯರು ಜನ ಔಷಧಿ ಕೇಂದ್ರದ ಮಾಲೀಕರುಗಳು ಭಾಗವಹಿಸಿದ್ದರು.


Comments
Post a Comment