2018-19 ರ ಬಿಬಿಎಂಪಿ ಮೇಯರ್ ಪಟ್ಟ ?

2018-19 ರ ಬಿಬಿಎಂಪಿ ಮೇಯರ್ ಪಟ್ಟ ?

ಮೇಯರ್ ಸ್ಥಾನದ ಮೇಲೆ ಜೆಡಿಎಸ್ ಕಣ್ಣು 

ನಮಗೊಂದು ಬಾರಿ ಪಟ್ಟ ಕಟ್ಟಿ

      
       ಬೆಂಗಳೂರು: ಬಿಬಿಎಂಪಿ ಮೇಯರ್ ಪಟ್ಟಕ್ಕಾಗಿ ಕಾಂಗ್ರೆಸ್‍ನಲ್ಲಿ ಭಾರೀ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ಜೆಡಿಎಸ್ ಕೂಡ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದೆ.
      ಸದ್ಯ ಸೆ.28ರಂದು ನಡೆಯಲಿರುವ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯೊಬ್ಬರು ಮಹಾಪೌರರಾಗಿ ಆಯ್ಕೆಯಾಗಲಿದ್ದಾರೆ. ಆದರೆ ಮೇಯರ್ ಸ್ಥಾನಕ್ಕೆ ಜಯನಗರ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಗಂಗಾಂಬಿಕೆ ಅಥವಾ ಶಾಂತಿನಗರ ವಾರ್ಡ್‍ನ ಸೌಮ್ಯ ಶಿವಕುಮಾರ್ ಪೈಕಿ ಯಾರನ್ನು ಆಯ್ಕೆ ಮಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ.
          ಇದರ ಬೆನ್ನಲ್ಲೇ ವಿಪಕ್ಷ ಬಿಜೆಪಿಯೂ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಅಗತ್ಯ ಸಂಖ್ಯಾಬಲ ಹೊಂದಿಲ್ಲವಾದರೂ ತಮ್ಮ ಪಕ್ಷದ ಮಹಿಳೆ ಸದಸ್ಯೆಯನ್ನು ಚುನಾವಣಾ ಕಣಕ್ಕಿಳಿಸಲು ತೀರ್ಮಾನ ಕೈಗೊಂಡಿದೆ. ಅಲ್ಲದೆ, ಬಿಜೆಪಿ ಕಾಂಗ್ರೆಸ್‍ನಲ್ಲೀ ಮೇಯರ್ ಪಟ್ಟಕ್ಕಾಗಿ ನಡೆಯುತ್ತಿರುವ ಭಾರೀ ಪೈಪೋಟಿಯನ್ನೆ ಬಳಸಿಕೊಂಡು ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಭಾರೀ ರಣತಂತ್ರ ರೂಪಿಸಿದೆ. ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜೆಡಿಎಸ್ ಕೂಡ ಸುಮ್ಮನೇ ಕೂರದೇ ತಾನು ಕೂಡ ಮೇಯರ್ ಪಟ್ಟಕ್ಕೆ ಇನ್ನಿಲ್ಲದ ಸರ್ಕಸ್ ಆರಂಭಿಸಿದೆ.
         ಪ್ರಸುತ್ತ ಕಾಂಗ್ರೆಸ್‍ಗೆ ಮೂರು ಬಾರಿ ಮೇಯರ್ ಸ್ಥಾನ ಬಿಟ್ಟುಕೊಡಲಾಗಿದೆ. ಹೀಗಾಗಿ ಈ ಬಾರಿ ಮೇಯರ್ ಸ್ಥಾನವನ್ನು ನಮ್ಮ ಪಕ್ಷಕ್ಕೆ ನೀಡಿ ಎನ್ನುವುದು ಜೆಡಿಎಸ್ ಬೇಡಿಕೆಯಾಗಿದೆ. 
         ಈ ಸಂಬಂಧ `ಬಿಪಿಎನ್ ನ್ಯೂಸ್ ’ ನೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮೇಯರ್ ಸ್ಥಾನ ಬಿಟ್ಟುಕೊಡ ಬೇಕು ಎಂದು ಆಗ್ರಹಿಸಿದರು. ಒಂದು ವೇಳೇ ಇದಕ್ಕೆ ಕಾಂಗ್ರೆಸ್ ಒಪ್ಪದಿದ್ದರೇ ಪಕ್ಷದ ಕಮಿಟಿ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್‍ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
        ಈ ನಡುವೆ ಕಾಂಗ್ರೆಸ್ ಪಕ್ಷವು ದೋಸ್ತಿ ಪಕ್ಷ ಜೆಡಿಎಸ್ ಪಟ್ಟಿಗೆ ಮಣಿದರೇಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಇಲ್ಲವೇ ಜೆಡಿಎಸ್ ಗುಂಪಿನ ನಾಯಕಿ ನೇತ್ರ ನಾರಾಯಣ್ ಇಬ್ಬರಲ್ಲಿ ಒಬ್ಬರು ಮೇಯರ್ ಅಭ್ಯರ್ಥಿ ಆಗಲಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.
        ಇನ್ನು ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‍ನಲ್ಲಿ ಪೈಪೋಟಿ ಆರಂಭಗೊಂಡಿದ್ದು, ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿಸಮಿತಿ ಅಧ್ಯಕ್ಷ ಇಮ್ರಾನ್ ಪಾಷ, ಅದೇ ಸಮಿತಿಯ ಮಾಜಿ ಅಧ್ಯಕ್ಷ ಭದ್ರೇಗೌಡ, ಹಿರಿಯ ಸದಸ್ಯ ದೇವದಾಸ್ ಹಾಗೂ ಕಳೆದ ಮೂರು ವರ್ಷಗಳಿಂದ ಯಾವುದೇ ಸಮಿತಿ ಅಧ್ಯಕ್ಷ ಗಿರಿ ದೊರೆಯದ ರಾಜಶೇಖರ್ ಅವರುಗಳು ಉಪಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. 
        ಈ ನಾಲ್ವರು ನಾಯಕರು ತಮ್ಮ ಗಾಡ್ ಫಾದರ್ಗಳ ನೆರವಿನ ಮೂಲಕ ಉಪಮೇಯರ್ ಗದ್ದುಗೆ ಅಲಂಕರಿಸಲು ತೆರೆಮರೆ ಕಸರತ್ತು ಆರಂಭಿಸಿದ್ದು, ಯಾರಿಗೆ ನಗರದ ದ್ವಿತೀಯ ಪ್ರಜೆ ಸ್ಥಾನ ಸಿಗುವುದೋ ಕಾದು ನೋಡಬೇಕು.

Comments

Popular posts from this blog

PMBJK ಹೊಸ ದೂರ ನೀತಿಗೆ ಮಾಲೀಕರ ತೀವ್ರ ಆಕ್ಷೇಪ – ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

RACE FOR 7: BANGALORE WALKS FOR RARE DISEASES