"ರಕ್ತ ನೀಡಿ ಮತ್ತು ಜಗತ್ತನ್ನು ಗೆಲ್ಲಿಸಿ" ವಿಶ್ವ ರಕ್ತದಾನ ದಿನಾಚರಣೆ 2021 ಕಾರ್ಯಕ್ರಮ

"ರಕ್ತ ನೀಡಿ ಮತ್ತು ಜಗತ್ತನ್ನು ಗೆಲ್ಲಿಸಿ" 

ವಿಶ್ವ ರಕ್ತದಾನ ದಿನಾಚರಣೆ 2021 ಕಾರ್ಯಕ್ರಮ 


         ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ನಿಯಮಿತವಾಗಿ ರಕ್ತದಾನವನ್ನು ಮಾಡೋಣ ಹಾಗೂ ನಮ್ಮ ಬಂಧು ಮಿತ್ರರಿಗೂ ರಕ್ತದಾನ ಮಾಡಲು ಪ್ರೇರೇಪಿಸಿ ರಕ್ತದಾನದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗೋಣ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


       ಬೆಂಗಳೂರಿನ ವಿಜಯನಗರದ ಲಯನ್ಸ್ ರಕ್ತ ನಿಧಿ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಲಯನ್ಸ್ ರಕ್ತ ನಿಧಿ ಹಾಗೂ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಜಿಲ್ಲೆ 317ಎ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ 2021 ಅಂಗವಾಗಿ "ರಕ್ತ ನೀಡಿ ಮತ್ತು ಜಗತ್ತನ್ನು ಗೆಲ್ಲಿಸಿ" ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಜೂನ್ 14, ಎಬಿ ರಕ್ತ ವ್ಯವಸ್ಥೆಯನ್ನು ಕಂಡುಹಿಡಿದ ವಿಜ್ಞಾನಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಕಾರ್ಲ್ ಲ್ಯಾಂಡ್‌ಸ್ಟೈನರ್‌ರವರ ಜನ್ಮದಿನದ ಅಂಗವಾಗಿ ವಿಶ್ವ ರಕ್ತದಾನ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ ರಕ್ತದಾನ ಜೀವದಾನ ಕೊರೋನಾ ದಿಂದ ಸಾವು ನೋವುಗಳು ಹೆಚ್ಚುತ್ತಿರುವ ಇತ್ತೀಚಿನ ಸಂಕಷ್ಟದ ದಿನಗಳಲ್ಲಿ ನಮ್ಮ ಜೀವ ಮತ್ತು ಜೀವನದ ಬಗ್ಗೆ ಇರುವ ಮಹತ್ವವನ್ನು ಹೆಚ್ಚಾಗಿ ಕಲಿತುಕೊಂಡಿದ್ದೇವೆ ಪ್ರತಿವರ್ಷವೂ ರಕ್ತದಾನದಿಂದ ಲಕ್ಷಾಂತರ ಜೀವಗಳು ಉಳಿಯುತ್ತಿವೆ ಆದ್ದರಿಂದ ರಕ್ತದಾನಿಗಳನ್ನು ಗುರುತಿಸಿ ಅವರನ್ನು ಉತ್ತೇಜಿಸಿ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ 317ಎ ಹಾಗೂ ಲಯನ್ಸ್ ರಕ್ತ ನಿಧಿ ರಕ್ತದಾನ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಮನುಷ್ಯನ ದೇಹದಲ್ಲಿ 4.5 ರಿಂದ 5.5 ಲೀಟರ್ ರಕ್ತ ಇರತ್ತೆ 18 ರಿಂದ 65 ವರ್ಷ ವಯೋಮಿತಿಯ ಆರೋಗ್ಯವಂತರು ವರ್ಷಕ್ಕೆ 2 ಬಾರಿಯಾದರೂ ರಕ್ತವನ್ನು ನೀಡಬಹುದು ಅದು ಶೀಘ್ರವೇ ಮರುಉತ್ಪಾದನೆಯಾಗುತ್ತದೆ. ಕೂರೋನಾ ವೈರಾಣುವಿನಿಂದಾಗಿ ರಕ್ತದ ಕೊರತೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಯುವಕರು ಮುಂದೆ ಬಂದು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕಿದೆ ಈಗಾಗಲೇ ಜಿಲ್ಲಾದ್ಯಂತ ಲಸಿಕೆ ಕಾರ್ಯ ಆರಂಭಿಸಿದ್ದೇವೆ ಲಸಿಕೆ ಪಡೆಯುವ ಮೊದಲು ಹಾಗೂ ಪಡೆದ 15 ದಿನಗಳ ನಂತರ ರಕ್ತದಾನವನ್ನು ಮಾಡಬಹುದು ಆದ್ದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ರಕ್ತದಾನವನ್ನು ಮಾಡೋಣ ಹಾಗೂ ನಮ್ಮ ಬಂಧುಮಿತ್ರರಿಗೂ ರಕ್ತದಾನ ಮಾಡಲು ಪ್ರೇರೇಪಿಸೋಣ ಎಂದು ಹೇಳಿದರು.


            ಬಳಿಕ ಲಯನ್ಸ್ ರಕ್ತ ನಿಧಿ ವ್ಯವಸ್ಥಾಪಕ ಟ್ರಸ್ಟಿ 
ಲಯನ್ ಮನೋಜ್ ಕುಮಾರ್ ಮಾತನಾಡಿ ಕೊರೋನಾವೈರಸ್ ದೇಶವ್ಯಾಪ್ತಿ ಹರಡಿ ರಕ್ತದ ಕೊರತೆ, ಸಾವು ನೋವುಗಳು ಹೆಚ್ಚಾಗಿ ಜನತೆ ಭಯಭೀತರಾಗಿರುವ ಈ ಸಂದರ್ಭದಲ್ಲಿ  ರಾಷ್ಟ್ರದ ಆರೋಗ್ಯ ವ್ಯವಸ್ಥೆಯಲ್ಲಿ ರಕ್ತ ವರ್ಗಾವಣೆ ಸೇವೆಗಳು ಅನಿವಾರ್ಯವಾಗಿರುತ್ತದೆ. ವಿವಿಧ ಮಧುಮೇಹಗಳು, ಶಸ್ತ್ರಚಿಕಿತ್ಸೆ, ಆಘಾತದ ಸಮಯದಲ್ಲಿ ಮಗುವಿನ ಜನನ ಇತ್ಯಾದಿ ಸಂದರ್ಭಗಳಲ್ಲಿ ವ್ಯಕ್ತಿಗಳ ಜೀವವನ್ನು ಉಳಿಸಲು ರಕ್ತ ವರ್ಗಾವಣೆ ಸೇವೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಮಾನವನ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆರೋಗ್ಯಕರ ವ್ಯಕ್ತಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಮಾಡಿಸುವ ಮೂಲಕ ರಕ್ತದ ಅವಶ್ಯಕತೆಯನ್ನು ಪೂರೈಸಬೇಕಾದ ಕಾರಣ ರಕ್ತದ ಕೊರತೆ ಸಂಭವಿಸದಂತೆ ರಕ್ತನಿಧಿ ಕೇಂದ್ರಗಳು ಹೆಚ್ಚಿನ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತದ ಯೂನಿಟ್ ಗಳನ್ನು ಶೇಖರಿಸಿ ರಕ್ತನಿಧಿ ಕೇಂದ್ರಗಳಿಗೆ ಆಗಮಿಸುವ ರೋಗಿಗಳಿಗೆ ಬದಲಿ ರಕ್ತ ಪಡೆಯದೆ ಅವಶ್ಯಕ ರಕ್ತವನ್ನು ನೀಡುವ ನಿಟ್ಟಿನಲ್ಲಿ ವಿಶ್ವ ರಕ್ತದಾನ ದಿನಾಚರಣೆಯ ಅಂಗವಾಗಿ ಜನ ಸಾಮನ್ಯರಲ್ಲಿ ರಕ್ತದಾನದ ಬಗ್ಗೆ ಅರಿವನ್ನು ಮೂಡಿಸಿ ಸ್ವಯಂ ಪ್ರೇರಿತ ರಕ್ತದಾನದ ಮಹತ್ವವನ್ನು ಜನ ಸಾಮಾನ್ಯರಿಗೆ ತಿಳಿಸುವುದರ ಜೊತೆಗೆ ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಮನಃಸ್ಥೆರ್ಯ ಮೂಡಿಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವುದು ಮತ್ತು ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಗೌರವಿಸಿ ಹೆಚ್ಚು ರಕ್ತದಾನ ಮಾಡಲು ಪ್ರೇರೇಪಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಲಯನ್ಸ್ ರಕ್ತ ನಿಧಿ ಹಾಗೂ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲೆ 317ಎ ವತಿಯಿಂದ ರಕ್ತ ನೀಡಿ ಮತ್ತು ಜಗತ್ತನ್ನು ಗೆಲ್ಲಿಸಿ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 


        ಈ ವೇಳೆ  ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ವಾರಿಯರ್ಸ್ ಗಳಿಗೆ ಹಾಗೂ ಕಷ್ಟಕ್ಕೆ ಸಿಲುಕಿ ಬಳಲುತ್ತಿರುವ ಕಲಾವಿದರು, ಎಚ್ ಐವಿ ಸೋಂಕಿತರು ಹಾಗೂ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ಕಿಟ್ ಗಳನ್ನು  ವಿತರಿಸಲಾಯಿತು. 


            ಈ ಸಂದರ್ಭದಲ್ಲಿ ಚಲನಚಿತ್ರ ನಾಯಕ ನಟ ಶ್ರೀನಗರ ಕಿಟ್ಟಿ, ಲಯನ್ಸ್ ರಕ್ತ ನಿಧಿ ವ್ಯವಸ್ಥಾಪಕ ಟ್ರಸ್ಟಿ ಲಯನ್ ಎಸ್. ಮನೋಜ್ ಕುಮಾರ್, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್ ಜಿ.ಎ, ಜಿಲ್ಲಾ ಕ್ಷಯರೋಗ ಮತ್ತು ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಎಸ್.ಎಸ್, ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್  317ಎ ರಾಜ್ಯಪಾಲರಾದ ಲಯನ್ ಡಾ. ಪ್ರಭಾ ಮೂರ್ತಿ, ಲಯನ್ಸ್ ಜಿಲ್ಲಾ ರಾಜ್ಯಪಾಲ ಲಯನ್ ವಿ ರೇಣುಕುಮಾರ್, ಲಯನ್ ಎಂ.ಎ ಶ್ರೀನಾಥ್, ಲಯನ್ ಎಂ.ಎಸ್ ರಾಮಕೃಷ್ಣಪ್ಪ, ಲಯನ್‌ ಡಾ. ಎಚ್.ಎಸ್ ಶಿವನಂಜಯ್ಯ, ಲಯನ್ ಡಾ. ಬಾಲರಾಜ್ ರಾಮಸ್ವಾಮಿ, ಯಶೋದಾ ಡಿ.ಎಂ, ಗಣೇಶ್ ರಾವ್ ಕೇಸರ್ ಕರ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ