ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಿಂದ ಬಾಲಕನ ಮೇಲೆ ಹಲ್ಲೆ ಆರೋಪ
ಬೆಂಗಳೂರು: ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಿವಾಸನಗರದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಐದು ವರ್ಷದ ಬಾಲಕನ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಪೋಷಕರ ಹೇಳಿಕೆಯ ಪ್ರಕಾರ, ಶ್ರೀ ಕನಕ ಇಂಗ್ಲಿಷ್ ಸ್ಕೂಲ್‌ನಲ್ಲಿ ಓದುತ್ತಿರುವ ಬಾಲಕನಿಗೆ ಶಿಕ್ಷಕಿ ಬೆನ್ನಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಕೂಡ ಇದೇ ರೀತಿಯ ಘಟನೆ ನಡೆದಿದ್ದಾಗಿ ಪೋಷಕರು ಆರೋಪಿಸಿದ್ದಾರೆ.
ಈ ವಿಚಾರವಾಗಿ ಪೋಷಕರು ಶಾಲೆಗೆ ತೆರಳಿ ಪ್ರಶ್ನಿಸಿದ ಬಳಿಕ ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗ ಶಿಕ್ಷಕಿ ಪೊಲೀಸರ ಮುಂದೆ ಕ್ಷಮೆಯಾಚನೆ ಮಾಡಿದ್ದರು ಎಂದು ತಿಳಿದುಬಂದಿದೆ. ಆದರೂ, ನಿನ್ನೆ ಮತ್ತೆ ಬಾಲಕನಿಗೆ ಹಲ್ಲೆ ನಡೆಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗ, ಅವರಿಗೆ ತಕ್ಕ ಮರ್ಯಾದೆ ನೀಡದೇ ಮಾತನಾಡಲಾಗಿದೆ ಎಂಬ ದೂರೂ ಕೇಳಿಬಂದಿದೆ. ಟಿಸಿ (Transfer Certificate) ನೀಡಿ ಶಾಲೆಯಿಂದ ಕಳುಹಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಇನ್ನೊಂದೆಡೆ, ಶಾಲಾ ಆಡಳಿತ ಮಂಡಳಿ “ಮಕ್ಕಳಿಗೆ ಹೊಡೆದು ಪಾಠ ಮಾಡುವುದಿಲ್ಲ; ಇಷ್ಟವಿಲ್ಲದಿದ್ದರೆ ಮಕ್ಕಳನ್ನು ಕರೆದುಕೊಂಡು ಹೋಗಬಹುದು” ಎಂದು ಪ್ರತಿಕ್ರಿಯಿಸಿರುವುದಾಗಿ ತಿಳಿದುಬಂದಿದೆ.
Comments
Post a Comment