kuwj ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಟರಾಜ್ ಬಿಪಿ ಆಯ್ಕೆ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪತ್ರಕರ್ತರಾದ ನಟರಾಜ್ ಬಿ.ಪಿ. ಅವರು ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ.
ನಗರದ ವಿವಿಧ ಪತ್ರಿಕಾ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರು ತಮ್ಮ ಅಮೂಲ್ಯ ಮತಗಳ ಮೂಲಕ ನಟರಾಜ್ ಬಿ.ಪಿ. ಅವರಿಗೆ ಬೆಂಬಲ ಸೂಚಿಸಿದ್ದು, ಸಂಘಟನೆಯಲ್ಲಿ ಅವರ ಸಕ್ರಿಯತೆ ಮತ್ತು ನಿಷ್ಠೆಗೆ ಮನ್ನಣೆ ನೀಡಿದಂತಾಗಿದೆ. ಚುನಾವಣೆ ಶಾಂತಿಪೂರ್ಣ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ನಡೆದಿದ್ದು, ಫಲಿತಾಂಶ ಪ್ರಕಟವಾದ ಕ್ಷಣದಿಂದಲೇ ಪತ್ರಕರ್ತ ವಲಯದಲ್ಲಿ ಹರ್ಷೋದ್ಗಾರ ವ್ಯಕ್ತವಾಯಿತು.
ಸಂಘಟನೆಯ ಹಿತಾಸಕ್ತಿಗಾಗಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ನಟರಾಜ್ ಬಿ.ಪಿ. ಅವರು ಪತ್ರಕರ್ತರ ವೃತ್ತಿಪರ ಭದ್ರತೆ, ಸಾಮಾಜಿಕ ಗೌರವ, ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಜಾರಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಸಂಘಟನೆಯನ್ನು ಇನ್ನಷ್ಟು ಸಂಘಟಿತಗೊಳಿಸಿ, ಸದಸ್ಯರ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ ಅವರು, “ನನ್ನ ಮೇಲೆ ವಿಶ್ವಾಸ ಇಟ್ಟು ಮತ ನೀಡಿದ ಪ್ರತಿಯೊಬ್ಬ ಪತ್ರಕರ್ತ ಸ್ನೇಹಿತರಿಗೆ ನಾನು ಸದಾ ಋಣಿ. ಈ ವಿಶ್ವಾಸಕ್ಕೆ ತಕ್ಕ ರೀತಿಯಲ್ಲಿ ಕಾರ್ಯನಿರ್ವಹಿಸಿ, ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸುತ್ತೇನೆ” ಎಂದು ಹೇಳಿದರು.
ನಟರಾಜ್ ಬಿ.ಪಿ. ಅವರ ಆಯ್ಕೆಗೆ ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘಟನೆಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂಬ ನಿರೀಕ್ಷೆ ಮೂಡಿದೆ.
Comments
Post a Comment