ಬಸವಣ್ಣನವರ ತತ್ವಗಳನ್ನು ದೇಶ-ವಿದೇಶಗಳಿಗೆ ಪಸರಿಸಲಾಗುತ್ತಿದೆ : ಸಚಿವ ವಿ ಸೋಮಣ್ಣ
ಬಸವಣ್ಣನವರ ತತ್ವಗಳನ್ನು ದೇಶ-ವಿದೇಶಗಳಿಗೆ ಪಸರಿಸಲಾಗುತ್ತಿದೆ : ಸಚಿವ ವಿ ಸೋಮಣ್ಣ
ಬೆಂಗಳೂರು: ಬಸವ ವೇದಿಕೆ ವತಿಯಿಂದ ಬಸವ ಜಯಂತಿ, ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ನೆರವೇರಿತು.
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಲೋಕಸಭಾ ಸದಸ್ಯ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೇಂದ್ರ ಸಚಿವ ವಿ. ಸೋಮಣ್ಣ ಉದ್ಘಾಟಿಸಿದರು.
ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, “2027ರಲ್ಲಿ ದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಿಸುವ ಯೋಜನೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಬಸವಣ್ಣನವರ ತತ್ವಗಳನ್ನು ದೇಶ-ವಿದೇಶಗಳಿಗೆ ಪಸರಿಸಲಾಗುತ್ತಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, “ಸಮಾಜದಲ್ಲಿ ವಚನಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲು ಕಾನೂನು ಬಲ ಅಗತ್ಯ. ವಚನ, ಭಗವದ್ಗೀತೆ ಮತ್ತು ಉಪನಿಷತ್‌ಗಳಿಗೆ ಕಾನೂನು ಮಾನ್ಯತೆ ಸಿಕ್ಕರೆ ಸಮಾಜದಲ್ಲಿ ಬದಲಾವಣೆ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಬಸವ ವೇದಿಕೆಯ ಅಧ್ಯಕ್ಷ ಎಸ್. ಸೋಮಶೇಖರ್ ಮಾತನಾಡಿ, ಬಸವ ತತ್ವಗಳ ಪ್ರಚಾರ ಮತ್ತು ಅನುಷ್ಠಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, “ಹುಟ್ಟು ಮತ್ತು ಸಾವಿನ ನಡುವಿನ ಅಲ್ಪ ಅವಧಿಯಲ್ಲಿ ನಾವೆಲ್ಲರೂ ವ್ಯಕ್ತಿತ್ವ ವಿಕಾಸದತ್ತ ಗಮನ ಹರಿಸಬೇಕು. ಬಸವ ತತ್ವಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವುದು ಕಷ್ಟವಾದರೂ ಪ್ರಯತ್ನ ನಿಲ್ಲಬಾರದು. ಬಸವಣ್ಣ ಶಾಶ್ವತ” ಎಂದರು.
ವಚನ ಸಾಹಿತ್ಯಶ್ರೀ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿ, ತಮ್ಮ ಬಾಲ್ಯದಲ್ಲಿಯೇ ಬಸವಣ್ಣ ಮತ್ತು ವಚನಕಾರರ ಬಗ್ಗೆ ಅರಿವು ಮೂಡಿಸಿದ ಅಜ್ಜನನ್ನು ಸ್ಮರಿಸಿದರು.
ಇದೇ ವೇಳೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಸಂದೇಶವನ್ನು ವಾಚಿಸಲಾಯಿತು. “ಇಂದಿನ ಸಮಾಜದಲ್ಲಿ ಮೌಲ್ಯಗಳ ಅಧಃಪತನ ಕಂಡುಬರುತ್ತಿದೆ. ವಿವೇಕಶಾಲಿಗಳು ಸಿನಿಕರಾಗುತ್ತಿದ್ದಾರೆ. ಬಸವಣ್ಣನ ಕ್ರಿಯಾಶೀಲತೆ ಮತ್ತು ಅಲ್ಲಮನ ತಾತ್ವಿಕತೆ ಇಂದಿನ ಕಾಲಕ್ಕೆ ಅಗತ್ಯ” ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಆರೋಗ್ಯದ ಸಮಸ್ಯೆಯಿಂದ ದೇವೇಗೌಡರು ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಬಸವಶ್ರೀ ಪ್ರಶಸ್ತಿಯನ್ನು ಅವರು ಸ್ವೀಕರಿಸಲು ಸಾಧ್ಯವಾಗಲಿಲ್ಲ; ಅವರ ಸಂದೇಶವನ್ನು ಬಸವ ವೇದಿಕೆ ಉಪಾಧ್ಯಕ್ಷ ಎಸ್. ಷಡಕ್ಷರಿ ವಾಚಿಸಿದರು.




Comments
Post a Comment